ಉದಯಪುರ ನಗರವಾದ ಕಥೆ

 ಸಂಜೆ ಜೋರಾಗಿ ಬಿದ್ದ ಮಳೆಗೆ ಪ್ರವಾಹ ಬಂದು ನದಿ ತಿರದ  ಹಲವಾರು ನಗರಗಳು ಜಲಾಮೃತಗೊಂಡ ತಾಜಾ ಸುದ್ದಿಗಳು ರಾಷ್ಟ್ರೀಯ ಪ್ರಸಿದ್ದ ಸುದ್ದಿ ವಾಹಿನಿಯಲ್ಲಿ ವೀಕ್ಷಿಸುತ್ತಿದ್ದ ಶಿವು, ಜನರ ಮೇಲೆ ದಾಳಿ ಮಾಡಿದ ಪ್ರಕೃತಿಯ ಕೋಪ ಕಣ್ಣಾರೆ ಕಂಡನು.ಶಿವು ಜನರ ಕಷ್ಟವನ್ನು ನೋಡಿ ದುಃಖಿಯಾದನು.
ಹೀಗೆಯೇ ಸುದ್ದಿ ನೋಡುತ್ತಿದ್ದ ಶಿವು ಟಿವಿ ರಿಮೋಟ್ ಕೈಯಲ್ಲಿ ಹಿಡಿದು ಶಯನಿ ಲೋಕಕ್ಕೆ ಪ್ರಯಾಣ ಬೆಳೆಸಿದನು.
                     ***
  ಶಿವು ಪ್ರಯಾಣ ಮಾಡುತ್ತ ಶಯನಿ ಲೋಕ ತಲುಪಿದ. ಶಯನಿ ಲೋಕದ ಪ್ರಸಿದ್ಧ ನಗರದಲ್ಲಿ ಆತ ವಿಹಾರಿಸುತ್ತಿದ್ದ.

“ಯಾರು ನೀನು?”
ಶಿವು ನಿಂತ.ಸುತ್ತಲೂ ನೋಡಿದ.ಯಾರು ಇಲ್ಲ.
ಮತ್ತೆ ಅದೇ ಪ್ರಶ್ನೆ. “ಯಾರು ನೀನು?”
ಶಿವು ಸುತ್ತಲೂ ನೋಡಿದ.ಯಾರು ಇಲ್ಲ.
“ನೀನು ಯಾರು?” ಶಿವು ಧೈರ್ಯ ಮಾಡಿ ಕೇಳಿದ.
ಆಶ್ಚರ್ಯ.. ಆತನ ಎದುರಿಗೆ ಶಯನಾ ಪ್ರತಕ್ಷರಾದಳು!

“ಶಿವು. ಬಂದೆಯಾ ನನ್ನ ಲೋಕಕ್ಕೆ?”ನಗುತ್ತಲೆ ಕೇಳಿದಳು.
“ಹೌದು ಬಂದೆ.”ಎಂದನು ಶಿವು ನಗುತ್ತ.
“ಕೈಯಲ್ಲಿ ಏನದು?” ಕೇಳಿದಳು ಶಯನಾ.
“ಟಿವಿ ರಿಮೋಟ್” ಎಂದನು ಶಿವು.
“ಈ ರಿಮೋಟ್ ಗಿಮೋಟ್ ತಯಾರು ಮಾಡಲು ಸುಮ್ನೆ ಸುಂದರ ಪ್ರಕೃತಿಯನ್ನು ನಾಶ ಮಾಡ್ತಾರೆ. ಹೀಗೆಯೇ ಉದಯಪುರ ನಗರ ಪ್ರಕೃತಿಯನ್ನು ನಾಶಮಾಡಿ ಅದರ ಮೇಲೆ ಬೆಳೆದು ಸುಂದರವಾಗಿ ಕಾಣಿಸುತ್ತಿತ್ತು. ಉದಯಪುರ ನಗರವಾದ ಕಥೆ ಕೇಳುತ್ತಾ ನನ್ನ ಲೋಕದಲ್ಲಿ ವಿಹಾರಿಸುತ್ತಿರು” ಎಂದು ಶಯನಾ ಕಥೆ ಹೇಳಲು ಆರಂಭಿಸಿತು.
***

  ದಂಡಕಾರಣ್ಯದ ಗುಡ್ಡಗಾಡು ಪ್ರದೇಶದಲ್ಲಿ ಕಂಬನಿ ನದಿ ಹರಿಯುತ್ತಿತ್ತು.ಆ ನದಿ ಮುಂದೆ ಒಂದು ವಿಶಾಲವಾದ ಬಯಲು ಪ್ರದೇಶದಲ್ಲಿ ಶಾಂತವಾಗಿ ಹರಿಯುವ ಮೂಲಕ ಜನವಾಸಕ್ಕೆ ಯೋಗ್ಯ ಸ್ಥಳವಾಯಿತು.ಅಲ್ಲಿಗೆ ಬಂದ ಅಲೆಮಾರಿಗಳು ಸಣ್ಣಪುಟ್ಟ ಗುಡಿಸಲುಗಳು ನಿರ್ಮಿಸಿ ವಾಸ ಮಾಡತೊಡಗಿದರು.ಅರಣ್ಯ ಅವರ ಸಂಪತ್ತು. ಬಯಲು ಹೊಲವ ಮಾಡಿ ಬೆಳೆ ಬೆಳೆದು ಜೀವನ ಸಾಗುತ್ತಿದ್ದರು.ಹೀಗೆ ವರ್ಷಗಳು ಕಳೆಯಿತು.

ಅಣ್ಣಯ್ಯ ಎಂಬುವನು ಆ ಅಲೆಮಾರಿಗಳ ನಾಯಕನಾದನು.ಸೂರ್ಯ ಉದಯವಾದಂತೆ ಉದಯವಾದ ಆ ಸ್ಥಳಕ್ಕೆ ಅವರು ಉದಯಪುರ
ಎಂದು ಕರೆದರು.ಮುಂದೆ ಅಣ್ಣಯ್ಯ ಮಾಲತಿ ಎಂಬ ತರುಣಿಯ ಜೊತೆ ಮದುವೆಯಾದನು. ಆ ದಂಪತಿಗಳಿಗೆ ಕರಣ ಎನ್ನುವ ಸುಂದರ ಮಗನು ಹುಟ್ಟಿದ.
ಕರಣ ಬೆಳೆದು ದೊಡ್ಡವನಾದಂತೆ ಅಣ್ಣಯ್ಯ ಮತ್ತು ಮಾಲತಿ ಹಣ ಸಂಪಾದಿಸಲು ಅವನನ್ನು ಗೋಮಂತಕ ರಾಜ್ಯಕ್ಕೆ ಕಳಿಸುವ ನಿರ್ಧಾರ ಮಾಡಿದರು.
***
ಕರಣ ತಂದೆ ತಾಯಿಯ ಇಚ್ಛೆಯಂತೆ ಗೋಮಂತಕ ರಾಜ್ಯಕ್ಕೆ ಬಂದನು. ಅವನು ತನ್ನ ತಂದೆಯ ಸ್ನೇಹಿತ ರೋಕಿಯ ಮನೆಯಲ್ಲಿ ಉಳಿಯಲು ಮೊದಲು ಮಾಡಿದ.ರೋಕಿ ಅಂಕಲ್ ಎಂದರೆ ಕರಣನಿಗೆ ತುಂಬಾ ಇಷ್ಟ. ಅವನು ವರ್ಷಕ್ಕೆ ಏನಿಲ್ಲ ಎಂದರು ನಾಕೈದು ಸಲ ಅಣ್ಣಯ್ಯನ ಮನೆಗೆ ಭೇಟಿ ಮಾಡುತ್ತಿದ್ದ.
“ಕರಣ ನಿನಗೆ ಯಾವ ಕೆಲಸ ಮಾಡಲು ಇಷ್ಟ?”
“ನೀವೆ ಹೇಳಿ ಅಂಕಲ್. ಯಾವುದಾದರು ಕೆಲಸ ಮಾಡಲು ನನಗೆ ಇಷ್ಟವೇ”
“ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತೀಯಾ?”
“ಆಗಬಹುದು ಅಂಕಲ್” ಎಂದನು ಕರಣ.
“ಸರಿ ನಾಳೆ ಬೆಳಿಗ್ಗೆ ರೆಡಿಯಾಗು. ನನ್ನ ಗೆಳೆಯನ ಮನೆಗೆ ಹೋಗೋಣ”. ಎಂದನು ರೋಕಿ.

ಮಾರನೇ ದಿನ ಬೆಳಿಗ್ಗೆ ಎದ್ದು ರೋಕಿ ಮತ್ತು ಕರಣ ರೋಕಿಯ ಗೆಳೆಯನ ಮನೆಗೆ ಬಂದರು ಮತ್ತು ಬಂದ ವಿಷಯವನ್ನು ಹೇಳಿದರು.

“ಓ..ಹೋ ಅಣ್ಣಯ್ಯನ ಮಗ ಕರಣ ಅಲ್ವಾ. ಒಂದು ಸಲ ಅವರ ಮನೆಗೆ ಹೋಗಿದ್ದೆ. ಆಮೇಲೆ ಹೋಗಲು ನನಗೆ ಪುರ್ಸೊತ್ತು ಎಲ್ಲಿದೆ ಹೇಳು? ಬಿಸ್ನೆಸ್ ನಲ್ಲೆ ವ್ಯಸ್ತನಾಗಿ ಎಷ್ಟೋ ವರ್ಷಗಳಾಯಿತು ನೋಡು”.
ಕರಣನ ಕಡೆ ತಿರುಗಿ
“ಹೇಗಿದ್ದಾರೆ ನಿಮ್ಮ ಅಪ್ಪ ಅಮ್ಮ”
“ಚೆನ್ನಾಗಿದ್ದಾರೆ” ಎಂದನು ಕರಣ.
ರೋಕಿಯ ಗೆಳೆಯ ಬೇರೆ ಯಾರು ಅಲ್ಲ. ಅವನು ವಿಶ್ವ ಪ್ರಸಿದ್ಧ ರೋಜ್ ವೈನ್ ಕಂಪನಿಯ ಮಾಲೀಕ ರಾಬರ್ಟ್. ಅವನಿಗೆ ಅನ್ನಾ ಎನ್ನುವ ಮಗಳಿದ್ದಾಳೆ. ಅವಳೇ ಈ ಕಂಪನಿಯ ಸಿಇಓ.
“ಅನ್ನಾ..” ರಾಬರ್ಟ್ ತನ್ನ ಮಗಳನ್ನು ಕರೆದ.
ಅನ್ನಾ ಅವಳ ಖಾಸಗಿ ಕೋಣೆಯಿಂದ ಹೊರಗೆ ಬಂದಳು. ಆಗಲೇ ಅವರ ಮನೆಯ ಪಾವರ್ ಕಟ್ ಆಯಿತು. ಏನು ಚಮತ್ಕಾರ! ಏನು ಅಚ್ಚರ್ಯ!!ರಾತ್ರಿಯ ಅಂಧಕಾರದಲ್ಲಿ ಚಂದ್ರನು ಹೊಳೆದಂತೆ ಆ ಬೆಳಕಿಲ್ಲದ ಕೋಣೆಯಲ್ಲಿ ಅನ್ನಾಳ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು. ಅಂದ್ರೇ ಲೆಕ್ಕ ಹಾಕುವುದು ಕಷ್ಟ ಅವಳು ಎಷ್ಟು ಸುಂದರವಾಗಿದ್ದಳು ಎಂದು. ಅವಳನ್ನು ಕಂಡು ಕರಣನ ಕಣ್ಣುಗಳು ಮೀಟುಕದೆ ನಿಂತಿತ್ತು. ಮುದ್ದು ಮನಸ್ಸಿಗೆ ಸಂದೇಶ ಕಳಿಸುತ್ತಿದೆ ಪ್ರೀತಿಯ.
ಪಾವರ್ ಬಂತು.ಬಲ್ಪ್ ಉರಿಯಿತು. ಕರಣ ವಾಸ್ತವ ಸ್ಥಿತಿಗೆ ಬಂದನು.
“ಅನ್ನಾ ಇವನು ನನ್ನ ಗೆಳೆಯನ ಮಗ ಕರಣ. ಅವನಿಗೆ ನಮ್ಮ ಕಂಪನಿಯಲ್ಲಿ ಒಂದು ಕೆಲಸ ಕೋಡು.” ಎಂದನು.
“ಯಾವ ಕೆಲಸ ಅಪ್ಪ”ಕೇಳಿದಳು ಅನ್ನಾ.
“ಯಾವ ಕೆಲಸ ಮಾಡ್ತಿಯಾ ಕರಣ?”
“ಯಾವುದಾದರೂ ಮಾಡ್ತೇನೆ ಅಂಕಲ್” ಎಂದನು ಕರಣ.
“ದ್ರಾಕ್ಷಿ ಹಣ್ಣಿನ ರಸ ತೆಗೆಯುವ ಕೆಲಸ ಮಾಡ್ತಿಯಾ?” ಕೇಳಿದಳು ಅನ್ನಾ.
“ಆಗಬಹುದು”ಎಂದನು ಕರಣ.
“ಮಗಳೇ. ಬೇರೆ ಕೆಲಸ ಇಲ್ವಾ?”
“ಸದ್ಯಕ್ಕೆ ಯಾವ ಕೆಲಸ ಇಲ್ಲ ಅಪ್ಪ”
“ಪರವಾಗಿಲ್ಲ ಅಂಕಲ್. ನಾನು ಆ ಕೆಲಸ ಮಾಡ್ತೇನೆ ಎಂದನು.
“ಸರಿ. ಇಬ್ಬರು ನೀವು ಕಂಪನಿಗೆ ಹೋಗಿ”ಎಂದನು ರಾಬರ್ಟ್.
ಅನ್ನಾ ಮತ್ತು ಕರಣ ಕಂಪನಿಯ ಕಡೆ ಹೋದರು ಇತ್ತ ರಾಬರ್ಟ್ ಮತ್ತು ರೋಕಿ ವಿಶ್ವ ಪ್ರಸಿದ್ಧ ಬ್ಲ್ಯಾಕ್ ಡಾಗ್ ವಿಸ್ಕಿ ಕುಡಿಯುವುದರಲ್ಲಿ ಮಗ್ನರಾದರು.
**
ಕರಣನಿಗೆ ಕೆಲಸ ಸಿಕ್ತು. ಕರಣ ದುಡಿಯುತ್ತಿದ್ದಂತೆ ಅಣ್ಣಯ್ಯನಿಗೂ ತನ್ನ ಮೇಲಿದ್ದ ಖರ್ಚುಗಳ ಭಾರ ಸ್ವಲ್ಪ ಇಳಿದಂತಾಯಿತು.ಹೀಗೆಯೇ ಕೆಲವು ವರ್ಷಗಳು ಕಳೆಯಿತು ಸಂತೋಷವಾಗಿ.
ಆದರೆ…ಇತ್ತ ದುಡ್ಡಿನ ಜೊತೆಗೆ ಪ್ರೀತಿಯು ಚಿಗುರಿದ್ದು ಇಬ್ಬರಿಗು ಗೊತ್ತೇ ಆಗಲಿಲ್ಲ ನೋಡಿ. ಅನ್ನಾ ಮತ್ತು ಕರಣನಿಗೆ.
***

 ಕರಣ ಮತ್ತು ಅನ್ನಾ ಅಚ್ಚು ಮೆಚ್ಚಿನ ಪ್ರೇಮಿಗಳಾದರು.
ಅವರಿಬ್ಬರ ಪ್ರೀತಿಗೆ ಚಂದ್ರ ನಕ್ಷತ್ರಗಳು ಸೋತರು.

ಚಂದ್ರ ಕರಣನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದರೆ!,
ನಕ್ಷತ್ರಗಳು ಅನ್ನಾಳ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿತ್ತು!!
ಇದನ್ನು ಕಂಡು ಅನ್ನಾ ಕರಣನಿಗೆ ಒಂದು ಪ್ರಶ್ನೆ ಕೇಳುತ್ತಾಳೆ.
“ನಮ್ಮಿಬ್ಬರ ಸುತ್ತಲೂ ಪ್ರದಕ್ಷಿಣೆ ಹಾಕುವ ಈ ಚಂದ್ರ ನಕ್ಷತ್ರಗಳನ್ನು ಕಂಡರೆ ನಿನಗೆ ಆಶ್ಚರ್ಯ ಆಗಲ್ವಾ ಕರಣ.”
“ಅನ್ನಾ, ಇದು ಕವಿ ಸೃಷ್ಟಿಯ ಪ್ರೇಮಲೋಕ.
ನಮಗೆ ಕಾಣುವ ವಸ್ತುಗಳಿಗೆಲ್ಲಾ ಹೃದಯವಿರುವಂತೆ
ಕಾಣುತ್ತಿದೆ ಅಲ್ವಾ.”
“ಆದರೆ… ಕರಣ ವಿಜ್ಞಾನದಲ್ಲಿ…?!”
“ಚಂದ್ರ ನಕ್ಷತ್ರಗಳು ವಿಜ್ಞಾನಕ್ಕೆ ಕೇವಲ ಮಣ್ಣು ಅಷ್ಟೇ.”
“ನಿನಗೆ ಯಾವುದು ಇಷ್ಟ ಕರಣ”
“ನನಗೆ ಕವಿಸೃಷ್ಟಿ ಕಣೇ.”
“ನನಗೆ ವಿಜ್ಞಾನ ಇಷ್ಟ.”
“ಯಾಕೆ..?”
“ವಿಜ್ಞಾನ ನೀಜವನ್ನೆ ಹೇಳುವುದು.”
“ಅನ್ನಾ ನೀನು ಹೇಳುವುದು ನಿಜ.ಆದರೆ,ಕಲೆ ಎನ್ನುವುದು ಸುಳ್ಳಾದರು, ನಮ್ಮದೆಯಾದ ಸುಂದರವಾದ ನಮ್ಮ ಸುತ್ತಲೂ ಪುಟ್ಟ ಲೋಕ ನಿರ್ಮಿಸುವುದು.ಆ ಲೋಕದಲ್ಲಿ ಪ್ರೇಮಿಗಳದ್ದೆ ದರ್ಬಾರ್..”
“ಕರಣ ಅರ್ಥವಾಗಿಲ್ಲ.”
“ಅಂದರೆ ನಾವಿಬ್ಬರೂ ಪ್ರೇಮಿಗಳೆಂದು ವಿಜ್ಞಾನ ಹೇಳಲ್ಲ.ವಿಜ್ಞಾನದ ದೃಷ್ಟಿಯಲ್ಲಿ ನಾವಿಬ್ಬರೂ ಕೇವಲ ಗಂಡ ಹೆಂಡತಿ ಅಷ್ಟೇ….!?”
“ಸಾಕು… ಸಾಕು… ಅರ್ಥವಾಯಿತು.”
ಎಂದು ನಕ್ಕಳು ಅನ್ನಾ .
‘ ಪ್ರೇಮಿಗಳಂದರೆ ಕಲಾಲೋಕದ ಕವಿಸೃಷ್ಟಿಯೇ..!?’
ಎನ್ನುವ ಪ್ರಶ್ನೆ ಅನ್ನಾಳ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ.
***
ಪ್ರತಿ ಗೂಡಿನಲ್ಲಿದ್ದ ಮರಿ ಹಕ್ಕಿಗಳಿಗೆ ಒಂದಲ್ಲ ಒಂದು ದಿನ ಗೂಡಿನಿಂದ ಹೊರ ಬಂದು ಹಾರಲೇ ಬೇಕು. ಆಗ ಕಾಣುವುದು ವಾಸ್ತವ ಪ್ರಪಂಚ. ಹಾಗೆಯೇ ಆಯಿತು ಕರಣ ಮತ್ತು ಅನ್ನಾಳ ಪ್ರೀತಿ. ಇವರಿಬ್ಬರ ಎಡೆಗೂಡಿನ ಪ್ರೀತಿಯ ಸದ್ದು ರಾಬರ್ಟ್ ರವರ ಕಿವಿಗೆ ಬಡಿಯಿತು. ಮುಗಿಲಿನಲ್ಲಿ ಮೇಘಗಳು ಘರ್ಜಿಸಿದಂತೆ ಹೀಗಾಗಲು ಸಾಧ್ಯವಿಲ್ಲ ಎಂದು ಇಬ್ಬರನ್ನು ತನ್ನ ಬಳಿಗೆ ಕರೆದು ಬೈದರು. ಕರಣನಿಗೆ ತಕ್ಷಣ ತನ್ನ ಕಂಪನಿಯಿಂದ ಕೆಲಸ ಬಿಟ್ಟು ಹೋಗುವಂತೆ ಆಜ್ಞೆ ಮಾಡಿದ.ಪ್ರೇಮಿಗಳು ದೂರವಾದರು. ಬೆಳದಿಂಗಳ ರಾತ್ರಿಯು ಇವರಿಬ್ಬರಿಗೂ ಪ್ರತಿ ದಿನ ಅಮವಾಸ್ಯೆಯ ರಾತ್ರಿ ಆಯಿತು.
***
ಕರಣ ಗೋಮಂತಕ ರಾಜ್ಯದಿಂದ ಉದಯಪುರಕ್ಕೆ ಬಂದನು. ಅವನು ಮನೆಗೆ ಬರುವ ಮುಂಚೆಯೇ ಅವನ ಪ್ರೇಮಗೀತೆ ಉದಯಪುರದಲ್ಲೆಲ್ಲ ಪ್ರಸಾರವಾಗಿತ್ತು. ಉದಯಪುರದ ಜನರು ಸಂಪ್ರದಾಯಸ್ಥರು. ಅನ್ನಾ ಮತ್ತು ಕರಣ ಅವರ ಪ್ರೀತಿ ಅವರಿಗೆ ಇಷ್ಟ ಆಗಿಲ್ಲ. ಕರಣ ಸಿಕ್ಕಾಗಲೆಲ್ಲ ಒಬ್ಬೊಬ್ಬರು ಒಂದೊಂತರವಾಗಿ ಮಾತನಾಡುತ್ತಿದ್ದರು. ಆದರು ಕರಣ ಅವರ ಮಾತೆಲ್ಲ ಕೇಳಿ ಸುಮ್ಮನಿರುತ್ತಿದ್ದನು. ಅವರ ತಂದೆ ತಾಯಿಗೆ ಮಗನ ಮದುವೆ ಮಾಡಿ ಬಿಡುವುದು ಉಚಿತವೆನಿಸುತು. ಆದರೆ ಕರಣನಿಗೆ ಯಾರು ಹುಡುಗಿ ಕೊಡುತ್ತಾರೆ?
ಹೀಗಿರುವಾಗ ಒಂದು ದಿನ ಕರಣನಿಗೆ ಒಂದು ಕೊರಿಯರ್ ಬಂತು.

ಕರಣ ಪಾರ್ಸೆಲ್ ಬಾಕ್ಸ್ ತೆರೆದು ನೋಡಿದ. ಅದರಲ್ಲಿ ಒಂದಿಷ್ಟು ನಗದು ದುಡ್ಡಿನ ಜೊತೆಗೆ ಒಂದು ಪತ್ರವಿತ್ತು. ಕೊರಿಯರ್ ಕಳಿಸಿದ್ದು ಬೇರೆ ಯಾರು ಅಲ್ಲ. ಅನ್ನಾನೇ ಕರಣನಿಗೆ ವ್ಯಾಪಾರ ಮಾಡಲು ಹಣದ ಜೊತೆಗೆ ಪತ್ರವನ್ನು ಕಳಿಸಿದ್ದಳು. ಆ ಪತ್ರದಲ್ಲಿ ಹೀಗೆ ಬರೆದಿದ್ದಳು
‘ಕರಣ ನೀನು ಕ್ಷೇಮವಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಕ್ಷೇಮವಾಗಿದ್ದೇನೆ. ನೀನು ಬೇಗ ಯಾವುದಾದರು ಒಂದು ವ್ಯಾಪಾರವನ್ನು ಮಾಡು. ಆದಷ್ಟು ಬೇಗ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು.’ಇಷ್ಟೆ ಸಂಕ್ಷಿಪ್ತವಾಗಿ ಬರೆದಿದ್ದಳು. ಕರಣ ಪತ್ರ ಕೈಯಲ್ಲಿ ಹಿಡಿದು ಭಾವುಕನಾದನು. ನನ್ನ ಅನ್ನಾ ಹೇಗಿರುವಳೋ ಎಂದು ಚಿಂತಿಸಿದನು. ಒಂದು ಕಡೆ ಅನ್ನಾಳ ನೆನಪು ಕಾಡಿದರೆ ಇನ್ನೊಂದು ಕಡೆ ಯಾವ ವ್ಯಾಪಾರ ಮಾಡಬೇಕು ಎನ್ನುವ ಚಿಂತೆ. ಕರಣ ರಾತ್ರಿಯೆಲ್ಲಾ ವಿಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದನು. ವ್ಯಾಪಾರದ ಯೋಜನೆಯನ್ನು ರಾತ್ರೋ ರಾತ್ರಿ ಸಿದ್ದಪಡಿಸಿದನು. ಇದು ಅನ್ನಾಳ ಜೊತೆಗಿನ ಒಡನಾಟದಿಂದ ಸಾಧ್ಯವಾಯಿತು.


ಕರಣ ವ್ಯಾಪಾರ ಮಾಡಲು ಪ್ರಾರಂಭಿಸಿದನು. ಆತನ ವ್ಯಾಪಾರ ವಹಿವಾಟು ಬೆಳೆದಂತೆ ಕ್ರಮೇಣವಾಗಿ ದೂರ ದೂರ ರಾಜ್ಯದ ಜನರು ಉದಯಪುರಕ್ಕೆ ಬಂದು ವಾಸಿಸತೊಡಗಿದರು.ಆ ಜನರಲ್ಲಿ ಕೆಲವರು ಕೆಲಸದವರು ಇನ್ನೂ ಕೆಲವರು ಕರಣನ ವ್ಯಾಪಾರದ ಪಾಲುದಾರರು ಇದ್ದರು.
ಸಂಪ್ರದಾಯದ ಪರಂಪರೆಯಲ್ಲೇ ಬೆಳೆದ ಉದಯಪುರ ಈಗ ಹಲವು ಸಂಕೃತಿಗಳ ಸಂಗಮವಾಯಿತು. ಈ ಮದ್ಯೆಯೇ ಯಾವ ವಿಘ್ನವು ಇಲ್ಲದೆ ಕರಣ ಮತ್ತು ಅನ್ನಾಳ ಮದುವೆಯು ಸಂಭ್ರಮದಿಂದ ನಡೆಯಿತು.


ಮರ ಕಡಿದರು ಮನೆ ಕಟ್ಟರು.ಕರಣ ಮತ್ತು ಅನ್ನಾಳ ಕಣ್ಮುಂದೆ ಉದಯಪುರ ನಗರವಾಗಿ ಬೆಳೆಯಿತು. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಹೊಸ ಹೊಸ ಆವಿಷ್ಕಾರಗಳು ಆಯಿತು. ಅದರ ಫಲವಾಗಿ ಬೆಳಕಿಗಾಗಿ ಮತ್ತು ಕೈಗಾರಿಕೆಗಳಿಗಾಗಿ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲು ಕಂಬನಿ ನದಿಗೆ ಅಡ್ಡಲಾಗಿ ಒಂದು ಜಲಾಶಯ ಕಟ್ಟರು!

ಮಳೆಗಾಲದ ದಿನಗಳಲ್ಲಿ ಒಂದು ಸಲ ಜೋರಾಗಿ ಬಿದ್ದ ಮಳೆಗೆ ಜಲಾಶಯ ಪೂರ್ಣವಾಗಿ ತುಂಬಿತು. ಸತತವಾಗಿ ಬೀಳುತ್ತಿದ್ದ ಮಳೆಯ ನೀರಿನ ರಭಸಕ್ಕೆ ಒಡೆದು ಹೋಯಿತು! ಉದಯಪುರ ನಗರ ಕೊಚ್ಚಿ ಹೋಯಿತು!

ಈ ದೃಶ್ಯ ಕಂಡು ಮರದ ಮೇಲಿನ ಗಿಳಿ ಹೀಗೆ ಹಾಡಿತು.

ಪಾಪದ ಪ್ರಕೃತಿ ಪೆಟ್ಟು ಪಡೆದು
ಸಹಿಸಲಾರದೆ ಸದ್ದು ಮಾಡಿದೆ
ನೋವಿನ ನರ್ತನ ನಯನ ನೀರು
ಪಾಪಿಗಳ ಪಾಪವು ತೊಳೆಯುತ್ತಿದೆ.
ಪ್ರೀತಿಗೆ ಪೀಡೆಯಾದವರಿಗೂ ರಕ್ಷಿಸುತ್ತಿದೆ
ಶುದ್ಧ ಗಂಗಾ ಜಲದಂತಹ ಪ್ರೀತಿಯು
ಕರಣ ಅನ್ನಾ ಕರಣ ಅನ್ನಾ ಕರಣ ಅನ್ನಾ.
***
ಹೀಗೆ ಉದಯಪುರ ನಗರವಾದ ಕಥೆ ಹೇಳಿದ ಶಯನಾ
ಕೋಳಿ ಕೂಗುತ್ತಿದ್ದಂತೆ ಮರದ ಮೇಲಿನ
ಗಿಳಿಯೊಂದಿಗೆ ಎಲೆಗಳಲ್ಲಿ ಕಣ್ಮರೆಯಾದಳು.
ಶಿವು ಕಣ್ಣು ತೆರೆದಾಗ ಕೈಯಲ್ಲಿ ಹಿಡಿದ ರಿಮೋಟ್ ಹಾಗೆಯೇ ಇತ್ತು.ಸುದ್ದಿ ವಾಹಿನಿಯಲ್ಲಿ ಭಕ್ತಿ ಗೀತೆಗಳು ಪ್ರಸಾರವಾಗಿತ್ತು.

ಲೇಖಕರು: ❣️ಪ್ರಿಯದರ್ಶಿ

Comments

Leave a Reply